Monday, February 12, 2018

ಉದ್ದಿನ ವಡೆ

ಅದೆಷ್ಟು ಗರಿ ಗರಿ ನನ್ನ ಆಫೀಸ್ ಕ್ಯಾಂಟೀನಿನ ಉದ್ದಿನ ವಡೆ ? ಆಂಬೊಡೆಗಿಂತ ನಂಗೆ
ಮುದ್ದಿನ ವಡೆ ಈ ಉದ್ದಿನ ವಡೆ. ಸಾಂಬಾರಿನಲ್ಲಿ ಮಜ್ಜನ ಮಾಡಿಸಿ ತಿನ್ನುವಾಗ ಅಪ್ಪಿ
ತಪ್ಪಿಯೂ ನೋಡುವುದಿಲ್ಲ ಆ ಕಡೆ ಈ ಕಡೆ.  ಅದಮ್ಯ ರುಚಿಯನ್ನು ತನ್ನೊಳಗೆ
ಹುದುಗಿಸಿಕೊಂಡು ಗರ್ವದಿಂದ ಉಬ್ಬಿರುವ ವಡೆ ಈ ಉದ್ದಿನ ವಡೆ. ಎಣ್ಣೆಯಲ್ಲಿ
ಮಿಂದು ವಡೆಯನ್ನು ತಿಂದವರನ್ನು ಎಣ್ಣೆ ಹೊಡೆದವರ ಹಾಗೆ ರುಚಿಯಲ್ಲಿ ತೇಲಿಸುವ ನಶೆಯ
ವಡೆ ಈ ಉದ್ದಿನ ವಡೆ.  ನೋಡಿದೊಡನೆ ನನ್ನ ಬಾಯಲ್ಲಿ ಜಲಪಾತದ ಹಾಗೆ ನೀರೂರಿಸುವ
ನಿಸರ್ಗದ ಅಚ್ಚರಿಯ ವಡೆ ಈ ಉದ್ದಿನ ವಡೆ. ತಿಂದಾಗ ಬಾಯಲ್ಲಿ ಉದಯಿಸುವ ಕುರುಮ್ ಕುರುಮ್
ಶಬ್ದ ಯಾಕೆ ಸಂಗೀತದಲ್ಲಿ ರಾಗವಾಗಲಿಲ್ಲ ಎಂದು ಮುಖಾರಿಯ* ಕಡೆ ಮುಖ ಮಾಡಿಸುವ
ವಡೆ ಉದ್ದಿನ ವಡೆ. ಚಮಚವನ್ನು ಮುಟ್ಟಿಸದೆ ನನ್ನ ಕೈಗಳ ಸ್ಪರ್ಶಕ್ಕೆ ಹಂಬಲಿಸುತ್ತಾ ನನ್ನ
ತಟ್ಟೆಯಿಂದ ನನನ್ನೇ ಮಾರ್ದವತೆಯಿಂದ ನೋಡುವ ಮೋಹಕ ವಡೆ ಈ ಉದ್ದಿನ ವಡೆ. ಕಿಂಚಿತ್ತೂ
ಕುಂದು ಬರದೇ ಕಂದು ಬಣ್ಣವನ್ನು ಸರಿಯಾದ ಪ್ರಮಾಣದಲ್ಲಿ ವಡೆಯನ್ನು ಬಾಣಲೆಯಲ್ಲಿ ಕರೆದು
ಲೇಪಿಸುವ ಹಾಗೆ ಮಾಡಿದ ಆ ಭಟ್ಟನ ಚಿತ್ರಕಲೆಯನ್ನು ವರ್ಣಿಸಲಸಾಧ್ಯವಾಗುತ್ತಿರುವ
ಕಲಾಸೃಷ್ಟಿಯ ಅಚ್ಚರಿಯ ವಡೆ ಈ ಉದ್ದಿನ ವಡೆ. ವಡೆಯ ಆ ವಯ್ಯಾರ,ವೃತ್ತಾಕಾರ
ನೋಡುತ್ತಿದ್ದರೆ ಒಂದು ಫಾರ್ಮುಲಾ ಹಾಕಿ ಅದರ ತ್ರಿಜ್ಯ, ಸುತ್ತಳತೆ  ಕಂಡುಹಿಡಿಯುವ ಹಾಗೆ
ಮಾಡುವ ಲೆಕ್ಕಾಚಾರದ ವಡೆ ಈ ಉದ್ದಿನ ವಡೆ.





ಆದರೆ ನೋಡಿ ನನ್ನ ಡೊಳ್ಳು ಹೊಟ್ಟೆಯ ಕಡೆ ಪ್ರಾಸದಿಂದ ಮನಸ್ಸು ಉಚ್ಚರಿಸಿತು
“ತಿನ್ನುತ್ತಿದ್ದರೆ ದಿನವೂ ಈ ಮಾಯಾ ವಡೆ , ಆಗುವುದು ಬೇಗ ನಿನ್ನ ಜೀವನ ಕಡೆ !”

*ಮುಖಾರಿ: ಕರ್ನಾಟಕ ಶಾಸ್ತ್ರೀಯ ಸಂಗೀತದ ವಿಷಾದದ ರಾಗ.

No comments:

Post a Comment

What it takes for a 100 day WorkOut Streak !

 Those who know me know that I am a great believer of consistency. I strongly believe that with consistency anything under the sun can be ac...